ಮಡಿಕೇರಿ
	ಕರ್ನಾಟಕ ರಾಜ್ಯದ ಕೊಡುಗು ಜಿಲ್ಲೆಯ ಒಂದು ತಾಲ್ಲೂಕು; ಹಾಗೂ ತಾಲ್ಲೂಕಿನ ಮತ್ತು ಜಿಲ್ಲೆಯ ಆಡಳಿತ ಕೇಂದ್ರ ಪಟ್ಟಣ. ಈ ತಾಲ್ಲೂಕನ್ನು ಪೂರ್ವದಲ್ಲಿ ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲ್ಲೂಕುಗಳೂ ಉತ್ತರ, ವಾಯುವ್ಯ ಮತ್ತು ಪಶ್ಚಿಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೂ ನೈಋತ್ಯ ಮತ್ತು ದಕ್ಷಿಣದಲ್ಲಿ ಕೇರಳ ರಾಜ್ಯವೂ ಸುತ್ತುವರಿದಿವೆ. ಮಡಿಕೇರಿ, ಭಾಗಮಂಡಲ ಮತ್ತು ನಾಪೋಕ್ಲು ಹೋಬಳಿಗಳು (ನಾಡುಗಳು). 74 ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ 1,526 ಚಕಿಮೀ. ಜನಸಂಖ್ಯೆ 2,64,447 (2001). ಕೊಡಗುಜಿಲ್ಲೆ ಮೈಸೂರಿಗೆ ಸೇರಿದಾಗ ಈಗಿನ ಮಡಿಕೇರಿ ತಾಲ್ಲೂಕಿನ ರಚನೆಯಾಯಿತು (15-12-1953).

	ಇದರ ಪಶ್ಚಿಮ ಭಾಗದಲ್ಲಿ ಗೋಡೆಯಂತೆ ನೇರವಾಗಿ ಪಶ್ಚಿಮ ಘಟ್ಟಗಳಿವೆ. ಬ್ರಹ್ಮಗಿರಿ ಶ್ರೇಣಿ ಕೊಡಗು ಜಿಲ್ಲೆಯನ್ನು ವೈನಾಡಿನಿಂದ ಬೇರ್ಪಡಿಸಿದೆ. ಈ ಶ್ರೇಣಿಯಲ್ಲಿ ಹನುಮಾನ ಬೆಟ್ಟ, ಕಡಂಗ ಮಾಲೆ ಮತ್ತು ಪೆರುಮಾಳ ಮಲೆ ಬೆಟ್ಟಗಳಿವೆ. ತಾಲ್ಲೂಕಿನ ದಕ್ಷಿಣದಲ್ಲಿ ಜಿಲ್ಲೆಯಲ್ಲೇ ಅತ್ಯುನ್ನತವಾದ 1.745 ಮೀಟರ್ ಎತ್ತರದ ತಡಿಯಂಡಮೋಳು ಬೆಟ್ಟವಿದೆ. ಇದೇ ಬೆಟ್ಟಸಾಲು ಪೂರ್ವಕ್ಕೆ ಮುಂದುವರಿದು ಮಡಿಕೇರಿ ಬಳಿ ವಾಯುವ್ಯಕ್ಕೆ ತಿರುಗುತ್ತದೆ. ಇಲ್ಲೆ ಸಂಪಾಜೆ ಕಣಿವೆಯಿದೆ. ತಡಿಯಂಡಮೋಳುವಿನ ಈಶಾನ್ಯದಲ್ಲಿ ಪಡಿತೊರದ ಬಳಿ ಇಗ್ಗುತಪ್ಪ ಕುಂಡ ಇದೆ. ಸುಮಾರು 5 ಕಿ.ಮೀ. ಮುಂದಕ್ಕೆ ಪೆರೂರ್ ಬೆಟ್ಟವಿದೆ. ಸುಮಾರು 7 ಕಿ.ಮೀ. ದೂರದಲ್ಲಿ ಶ್ರೀಮಂಗಲ ಶಿಖರವಿದೆ. ಶ್ರೀಮಂಗಲ ಬೆಟ್ಟದ ಸಾಲಿನಲ್ಲೇ ಕಾವೇರಿಯ ಜನ್ಮಸ್ಥಳ ಬ್ರಹ್ಮಗಿರಿ ಇದೆ. ಮಡಿಕೇರಿಯ ಉತ್ತರಕ್ಕೆ 14 ಕಿ.ಮೀ. ದೂರದಲ್ಲಿ ಸುಬ್ರಹ್ಮಣ್ಯ ಪರ್ವತಶ್ರೇಣಿಗೆ ಸೇರಿದ ಕೋಟೆಬೆಟ್ಟವಿದೆ. ಇಡೀ ತಾಲ್ಲೂಕು ಪರ್ವತಮಯವಾಗಿದ್ದು ಹಸುರು ಕಾಡುಗಳಿಂದ ಮತ್ತು ಹುಲ್ಲುಗಾವಲುಗಳಿಂದ ಕೂಡಿದೆ.

	ಕೊಡಗಿನ ಮುಖ್ಯನದಿ ಕಾವೇರಿ. ಈ ತಾಲ್ಲೂಕಿನ ಬ್ರಹ್ಮಗಿರಿಯ ತಲಕಾವೇರಿಯಲ್ಲಿ ಇದರ ಉಗಮ. ಕನ್ನಿಕೆಭಾಗ ಮಂಡಲದ ಬಳಿ ಕಾವೇರಿಯನ್ನು ಸೇರುತ್ತದೆ. ಸುಜ್ಯೋತಿ ಎಂಬ ಗುಪ್ತಗಾಮಿ ನದಿಯೂ ಇಲ್ಲಿ ಸೇರುವುದರಿಂದ ಈ ಸ್ಥಳವನ್ನು ದಕ್ಷಿಣದ ಪ್ರಯಾಗವೆನ್ನುವರು. ಇದರ ಜೊತೆಗೆ ಕಕ್ಕಬ್ಬೆ, ಮುತ್ತರೆ ಮುಟ್ಟ ಈ ನದಿಗಳೂ ಕಾವೇರಿಯನ್ನು ಸೇರುತ್ತವೆ.

	ಪಶ್ಚಿಮದ ಕಡೆ ಹರಿಯುವ ಈ ತಾಲ್ಲೂಕಿನ ನದಿಗಳಲ್ಲಿ ನಿಜಕಲ್ ಮುಖ್ಯವಾದುದು. ಇದು ಸಂಪಾಜೆ ಕಣಿವೆಯ ಮುಖಾಂತರ ಹರಿದು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸುತ್ತದೆ. ತಲಕಾವೇರಿ ಬಳಿಯ ಸುಳ್ಯದ ಬಳಿ ಹುಟ್ಟುವ ಬಸವಾರಿ ಹೊಳೆ ವಾಯುವ್ಯದ ಕಡೆ ಹರಿಯುತ್ತದೆ. ಪಶ್ಚಿಮದ ಕಡೆ ಹರಿಯುವ ಮುಂಡ್ರೋತು ಮತ್ತು ಪೆರಿಯಮಲೆ ಹೊಳೆಗಳು ತಾಲ್ಲೂಕಿನ ಎಲ್ಲೆಯ ಬಳಿ ಒಂದಾಗಿ ಕೇರಳವನ್ನು ಪ್ರವೇಶಿಸುತ್ತವೆ.

	ಈ ತಾಲ್ಲೂಕಿನ ವಾಯುಗುಣ ಉಲ್ಲಾಸದಾಯಕವಾದ್ದು. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 3,237 ಮಿಮೀ, ಪಶ್ಚಿಮದಿಂದ ಪೂರ್ವದ ಕಡೆಗೆ ಮಳೆ ಕಡಿಮೆಯಾಗುತ್ತ ಹೋಗುತ್ತದೆ. ಭಾಗಮಂಡಲದಲ್ಲಿ 6032.3 ಮಿಮೀ ಮಳೆ ಬೀಳುತ್ತದೆ. ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಅತ್ಯಂತ ಹೆಚ್ಚು ಮಳೆಯಾಗುತ್ತದೆ. ಇದು ನೈಋತ್ಯ ವಾಣಿಜ್ಯ ಮಾರುತಗಳಿಂದ ಸುಮಾರು 130 ದಿನಗಳಲ್ಲಿ ಬೀಳುತ್ತದೆ. ಮಾರ್ಚ್, ಏಪ್ರಿಲ್ ಅತ್ಯುಷ್ಣದ ತಿಂಗಳುಗಳು, ಗರಿಷ್ಠ ಉಷ್ಣತೆ 28.6ºಅ, ಕನಿಷ್ಠ ಉಷ್ಣತೆ 17.8º ಅ.

ತಾಲ್ಲೂಕಿನ ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ಹೇರಳ ಅರಣ್ಯ ಸಂಪತ್ತಿನ ನಿತ್ಯ ಹರಿದ್ವರ್ಣದ ಕಾಡುಗಳಿವೆ. ಕೆಲವು ಕಡೆ ಅರಣ್ಯ ಇಲಾಖೆಯವರು ಮರಗಳನ್ನು ನೆಟ್ಟು ಬೆಳೆಸುತ್ತಾರೆ. ಬೀಟೆ ಮೆದುಮರಗಳನ್ನು ಬೆಳೆಸಲಾಗುತ್ತದೆ. ಇಲ್ಲಿಂದ ಸಾಗುವಾನಿ ಮೋಪುಗಳನ್ನು ಹುಣಸೂರಿಗೆ ಕಳುಹಿಸುತ್ತಾರೆ. ರಕ್ಷಿತ ಅರಣ್ಯ ಪ್ರದೇಶಗಳುಂಟು.

	ಬತ್ತ ಮುಖ್ಯ ಬೆಳೆ. ಇದನ್ನು ಹೆಚ್ಚು ಮಳೆ ಬೀಳುವ ತಗ್ಗು ಬಯಲು, ಕಣಿವೆಗಳಲ್ಲಿ ಬೆಳೆಸುತ್ತಾರೆ. ಕೆಲವು ಕಡೆ ವರ್ಷಕ್ಕೆ ಎರಡು ಬೆಳೆ ತೆಗೆಯುವುದೂ ಉಂಟು. ನೂರಾರು ವರ್ಷಗಳಿಂದಲೂ ಈ ತಾಲ್ಲೂಕಿನಲ್ಲಿ ಕಾಫಿ ಬೆಳೆಸುತ್ತಾರೆ. ಟೀ ತೋಟಗಳೂ ಇವೆ. ದಕ್ಷಿಣ ಭಾರತದಲ್ಲೆಲ್ಲ ಖ್ಯಾತಗೊಂಡಿರುವ ಕೊಡಗಿನ ಕಿತ್ತಳೆಯನ್ನು ಹೇರಳವಾಗಿ ಬೆಳೆಸುತ್ತಾರೆ. ಯಾಲಕ್ಕಿ ಮತ್ತೊಂದು ಮುಖ್ಯ ಆರ್ಥಿಕ ಬೆಳೆ. ಕರಿಮೆಣಸನ್ನೂ ಹೇರಳವಾಗಿ ಬೆಳೆಸುತ್ತಾರೆ. ಜೊತೆಗೆ ರಾಗಿ, ಅಡಿಕೆ ಮತ್ತು ತೆಂಗುಗಳನ್ನು ಅಲ್ಲಲ್ಲಿ ಬೆಳೆಸುತ್ತಾರೆ. ಸಂಪಾಜೆಯಲ್ಲಿ ರಬ್ಬರ್ ತೋಟಗಳು ಮತ್ತು ಗೇರುಮರಗಳು ಇವೆ. ಮಡಿಕೇರಿ ಬಳಿ ಸರ್ಕಾರಿ ವ್ಯವಸಾಯ ಫಾರಮ್ ಇದೆ.

	ಜೇನುಸಾಕಣೆ ಒಂದು ಮುಖ್ಯ ಉಪ ಕಸುಬು. ಪಶುಪಾಲನೆಯುಂಟು. ಚಾಪೆ ಹೆಣೆಯುವ, ಮಡಕೆಮಾಡುವ ಗೃಹಕೈಗಾರಿಕೆಗಳುಂಟು. ಭಾಗಮಂಡಲದಲ್ಲಿ "ಮಧುವನ" ವೆಂಬ ಜೇನು ಕೃಷಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ನಾಪೋಕ್ಲಿನಲ್ಲಿ ಮಣ್ಣಿನ ಪಾತ್ರೆಗಳು, ಸಂಪಾಜೆಯಲ್ಲಿ ರಬ್ಬರ್, ಮಡಿಕೇರಿಯಲ್ಲಿ ತೆಳು ಪ್ಲಾಸ್ಟಿಕ್ ಚೀಲಗಳನ್ನು ಮಾಡುವ ಮತ್ತು ಪಾತ್ರೆಗಳನ್ನು ತಯಾರಿಸುವ ಹಾಗೂ ಬತ್ತದ ಗಿರಣಿಗಳು, ಮರಕೊಯ್ಯುವ ಕಾರ್ಖಾನೆಗಳು ಇವೆ. ಈ ತಾಲ್ಲೂಕಿನಿಂದ ಕಾಫಿ, ಬತ್ತ, ಕಿತ್ತಳೆ, ಏಲಕ್ಕಿ, ಜೇನುತುಪ್ಪ, ಮರದದಿಮ್ಮಿಗಳು ಮತ್ತು ರಬ್ಬರನ್ನು ರಫ್ತು ಮಾಡಲಾಗುತ್ತದೆ. ಎಣ್ಣೆ, ಮಸಾಲೆ ವಸ್ತುಗಳು, ನೇಯ್ಗೆ ಬಟ್ಟೆಗಳು, ಉಪ್ಪು, ಇತ್ಯಾದಿ ನಿತ್ಯೋಪಯೋಗಿ ವಸ್ತುಗಳನ್ನು ಆಮದುಮಾಡಿಕೊಳ್ಳಲಾಗುತ್ತದೆ.

	ಇಲ್ಲಿಯ ಕೊಡವರು ಕೊಡವ ಭಾಷೆಯನ್ನು ಆಡುವರು. ಕೈಲ್‍ಪೊಳದ್, ಕಾವೇರಿ ಸಂಕ್ರಮಣ, ಹುತ್ತರಿ ಇವರ ಮುಖ್ಯ ಹಬ್ಬಗಳು. ನೃತ್ಯಗಳಲ್ಲಿ ಪರಿಯಕಳಿ ಮತ್ತು ಬೋಳುಕಾಟು ಮುಖ್ಯವಾದವು.

	ಕೊಡಗಿನ ಹೆದ್ದಾರಿಗಳು ಈ ತಾಲ್ಲೂಕಿನಲ್ಲಿವೆ ಮೈಸೂರು-ಮಂಗಳೂರು ಇತ್ಯಾದಿ ಮಡಿಕೇರಿ ಸಂಪಾಜೆಗಳ ಮುಖಾಂತರ ದಕ್ಷಿಣ ಕನ್ನಡವನ್ನು ಪ್ರವೇಶಿಸುವುದು. ಮಡಿಕೇರಿಯಿಂದ ದಕ್ಷಿಣದ ಕಡೆಗೆ ವಿರಾಜಪೇಟೆಯ ಮುಖಾಂತರ ಕೇರಳದ ತಲಚೇರಿಯನ್ನೂ ಈಶಾನ್ಯದ ಕಡೆ ಸೋಮವಾರಪೇಟೆಯ ಮುಖಾಂತರ ಹಾಸನ ಜಿಲ್ಲೆಯನ್ನೂ ಮೂರ್ನಾಡಿ ಮುಖಾಂತರ ವಿರಾಜಪೇಟೆಯನ್ನು ತಲಪುವ ಹೆದ್ದಾರಿಗಳಿವೆ. ಮಡಿಕೇರಿ-ಭಾಗಮಂಡಲ-ತಲಕಾವೇರಿ, ನಾಪೋಕ್ಲು-ವಿರಾಜಪೇಟೆ ರಸ್ತೆಗಳ ಜೊತೆಗೆ ಇನ್ನು ಕೆಲವು ಉತ್ತಮ ರಸ್ತೆಗಳಿವೆ. ತಾಲ್ಲೂಕಿನಲ್ಲಿ ವಿದ್ಯುತ್, ಅಂಚೆ, ತಂತಿ, ದೂರವಾಣಿ ಸೌಲಭ್ಯಗಳೂ ಬ್ಯಾಂಕುಗಳೂ ಸಹಕಾರಿಸಂಘಗಳೂ ಶಾಲಾಕಾಲೇಜುಗಳೂ ಸರ್ಕಾರಿ ಆಸ್ಪತ್ರೆ, ವೈದ್ಯಾಲಯಗಳೂ ಇವೆ.

	ಭಾಗಮಂಡಲ (ನೋಡಿ- ಭಾಗಮಂಡಲ) ಮಡಿಕೇರಿಯ ಪಶ್ಚಿಮಕ್ಕೆ ಇದೆ. ಇಲ್ಲಿಯ ಸಂಗಮ ಕ್ಷೇತ್ರದಲ್ಲಿ ತುಲಾ ಸಂಕ್ರಮಣದಂದು ಸ್ನಾನಮಾಡಲು ಸಾವಿರಾರು ಯಾತ್ರಿಕರು ಬರುತ್ತಾರೆ. 

	ಪಡಿತೋರ ಕಣಿವೆ ಬಳಿಯ ಕಾಡಿನಲ್ಲಿ ಕೊಡವರ ಆರಾಧ್ಯದೇವತೆ ಇಗ್ಗುತಪ್ಪ (ಸುಬ್ರಹ್ಮಣ್ಯ) ದೇವರ ಬೆಟ್ಟವಿದೆ. ವಿಷ್ಣು ಸಂಕ್ರಮಣದಂದು ಇಲ್ಲಿ ಪ್ರಸಿದ್ಧ ಜಾತ್ರೆ ನಡೆಯುತ್ತದೆ. ಮಡಿಕೇರಿಗೆ 5 ಕಿಮೀ ದೂರದಲ್ಲಿ ಅಬ್ಬಿ ಜಲಪಾತವಿದೆ. ಮಡಿಕೇರಿಯ ದಕ್ಷಿಣದಲ್ಲಿ 21 ಕಿಮೀ ದೂರದಲ್ಲಿ ಬಲಮುರಿಯಿದೆ. ಇದೊಂದು ಯಾತ್ರಾಸ್ಥಳ. ಮಡಿಕೇರಿಗೆ 10 ಕಿಮೀ ದೂರವಿರುವ ಹಾಲೇರಿ ಐತಿಹಾಸಿಕ ಸ್ಥಳ. ದೊಡ್ಡವೀರರಾಜೇಂದ್ರ 1792ರಲ್ಲಿ ಯುವಕಪಾಡಿ ಗ್ರಾಮದ ಬಳಿ ಕಟ್ಟಿಸಿದ ನಾಲ್ಕುನಾಡು ಅರಮನೆ ಇದೆ.
(ಕೆ.ಆರ್.ಆರ್.)

	ಮಡಿಕೇರಿ ಕೊಡಗು ಜಿಲ್ಲೆಯ ಮತ್ತು ಅದೇ ತಾಲ್ಲೂಕು ಹಾಗೂ ಹೋಬಳಿಯ ಆಡಳಿತ ಕೇಂದ್ರ ಪಟ್ಟಣ. ಉತ್ತರ ಅಕ್ಷಾಂಶ 12º 25(, ಪೂರ್ವ ರೇಖಾಂಶ 75º 45( ಮೈಸೂರಿನ ಪಶ್ಚಿಮಕ್ಕೆ 121 ಕಿಮೀ ದೂರದಲ್ಲೂ ಮಂಗಳೂರಿನ ಆಗ್ನೇಯಕ್ಕೆ 135 ಕಿಮೀ ದೂರದಲ್ಲೂ ಈ ಪಟ್ಟಣವಿದೆ. ಜನಸಂಖ್ಯೆ 32,286 (2001). ರೈಲುಮಾರ್ಗ ಇಲ್ಲದಿದ್ದರೂ ಮೈಸೂರು-ಮಂಗಳೂರು ಸಂಚಾರ ಮಾರ್ಗದ ಹೆದ್ದಾರಿಯ ಮಧ್ಯದಲ್ಲಿದ್ದು ಉತ್ತಮ ಸಂಪರ್ಕ ಸೌಲಭ್ಯ ಪಡೆದಿದೆ. ನಗರಜೀವನದ ಇತರೆಲ್ಲ ಸೌಕರ್ಯಗಳೂ ಇಲ್ಲಿವೆ. ಶಾಲೆ, ಕಾಲೇಜು, ಸರ್ಕಾರಿ ಕಚೇರಿ, ಸಾರ್ವಜನಿಕ ಸಂಸ್ಥೆ, ಬ್ಯಾಂಕು, ಸರ್ಕಾರಿ ಆಸ್ಪತ್ರೆ, ಪಶುವೈದ್ಯಾಲಯ, ಸರ್ಕಾರಿ ಮುದ್ರಣಾಲಯ, ಕೈಗಾರಿಕಾ ತರಬೇತಿ ಕೇಂದ್ರ ಮುಂತಾದವುಗಳಿವೆ. ವ್ಯಾಪಾರಕೇಂದ್ರ, ಪುರಸಭಾಡಳಿತವಿದೆ. ಪಟ್ಟಣ ಸಮುದ್ರಮಟ್ಟದಿಂದ ಸುಮಾರು 1189 ಮೀಟರ್ ಎತ್ತರವಿದ್ದು ವರ್ಷಪೂರ್ತಿ ತಂಪಾದ ಹವೆ ಇರುತ್ತದೆ. ಕೊಡಗಿನ ಹಾಲೇರಿ ಮನೆತನದ ಮುದ್ದುರಾಜ ಈಗಿನ ಮಡಿಕೇರಿಯನ್ನು 1681ರಲ್ಲಿ ನಿರ್ಮಿಸಿ ಹಾಲೇರಿಯಿಂದ ಇಲ್ಲಿಗೆ ತನ್ನ ರಾಜಧಾನಿ ಬದಲಾಯಿಸಿದ. ಇವನ ಹೆಸರಿನಲ್ಲಿ ಮುದ್ದುಕೇರಿಯೆಂದು ಹೆಸರಾಗಿ ಮುಂದೆ ಮಡಿಕೇರಿಯಾಯಿತು. ಟಿಪ್ಪು ಇದನ್ನು ಗೆದ್ದು ಜಾಫರಾಬಾದ್ ಎಂದು ಹೆಸರಿಟ್ಟಿದ್ದ. 1790ರಲ್ಲಿ ವೀರರಾಜೇಂದ್ರ ಇದನ್ನು ಗೆದ್ದು ತನ್ನ ಪ್ರೀತಿಯ ರಾಣಿ ಮಹದೇವಮ್ಮನ ಹೆಸರಿನಲ್ಲಿ ಕೋಟೆಗೆ ಉತ್ತರದಲ್ಲಿ ಮಹದೇವಪೇಟೆಯನ್ನು ನಿರ್ಮಿಸಿದ (1800). ಮಡಿಕೇರಿಯ ಕೋಟೆ ಷಡ್ಭುಜಾಕೃತಿಯಲ್ಲಿದ್ದು ಸುತ್ತಲೂ ಕಂದಕವಿತ್ತು. ಆರು ಕೋನಗಳಲ್ಲೂ ಬುರುಜುಗಳಿವೆ. ಪ್ರವೇಶದ್ವಾರ ಬಳಸಾಗಿದ್ದು, ಮೂರು ದ್ವಾರಗಳಿಂದ ರಕ್ಷಿಸಲ್ಪಟ್ಟಿದೆ. ಕೋಟೆಯೊಳಗಿನ ಅರಮನೆಯನ್ನು 2ನೆಯ ಲಿಂಗರಾಜೇಂದ್ರ (1811-20) ಕಟ್ಟಿಸಿದ. ಇಲ್ಲಿ ಗ್ರಂಥಾಲಯ ಮತ್ತು ಐತಿಹಾಸಿಕ ವಸ್ತುಗಳ ಸಂಗ್ರಹಾಲಯವಿದೆ. ಇದರ ದಕ್ಷಿಣದಲ್ಲಿದ್ದ ವೀರಭದ್ರ ದೇವಾಲಯವನ್ನು 1855ರಲ್ಲಿ ಚರ್ಚ್ ಆಗಿ ಬದಲಾಯಿಸಲಾಯಿತು. ಕೋಟೆಯ ಪ್ರವೇಶದ್ವಾರದ ಬಳಿ ಗಾರೆಯಿಂದ ನಿರ್ಮಿತವಾದ ನಿಜಗಾತ್ರದ ಎರಡು ಆನೆಗಳಿವೆ.

	ಕೋಟೆಯ ಪೂರ್ವದ ತಗ್ಗಿನಲ್ಲಿ 1820ರಲ್ಲಿ ಲಿಂಗರಾಜೇಂದ್ರ ಕಟ್ಟಿಸಿದ ಓಂಕಾರೇಶ್ವರ ದೇವಾಲಯವಿದೆ. ದೇವಾಲಯದ ಎದುರಿಗೆ ಮಂಟಪವಿರುವ ಕೊಳವಿದೆ. ಮಹದೇವಪೇಟೆಯ ಉತ್ತರದ ಅಂಚಿನಲ್ಲಿ ಕೊಡಗಿನ ಅರಸರ ಗದ್ದುಗೆಗಳಿವೆ. ವೀರರಾಜೇಂದ್ರ ಸಮಾಧಿ ಆಕರ್ಷಕವಾಗಿದೆ. ಮಧ್ಯದಲ್ಲಿಯ ಸುಂದರಗೋಳದಲ್ಲಿ ಚಿನ್ನದ ಚೆಂಡು ಇದೆ. ಲಿಂಗರಾಜೇಂದ್ರ, ರಾಜಪುರೋಹಿತ ರುದ್ರಪ್ಪ, ಬಿದ್ದಂಡ್ರ ಬೋಪು ಮತ್ತಿತರರ ಗದ್ದುಗೆಗಳೂ ಇಲ್ಲಿವೆ.

	ಮಡಿಕೇರಿಯ ರಾಜಾಸೀಟ್ ಮಂಟಪದ ಮೂಲಕ ನೋಡಿದರೆ ದಕ್ಷಿಣ ಭಾರತದಲ್ಲಿ ಸಿಗದಂಥ ರಮಣೀಯ ದೃಶ್ಯಗಳು ಕಂಡುಬರುವುವು. ಇದರಡಿಯಲ್ಲಿಯ ಬತ್ತದ ಹಸುರು ಗದ್ದೆಗಳು, ಮಂಗಳೂರಿಗೆ ಹೋಗುವ ಹಾವುಹರಿವಿನಂಥ ಬಳಸು ರಸ್ತೆ, ದೂರದಲ್ಲಿಯ ಧೀರಗಂಭೀರ ಶಿಖರಗಳು ನೋಟಕರನ್ನು ಸಮ್ಮೋಹನಗೊಳಿಸುತ್ತವೆ. ಮಡಿಕೇರಿಯಲ್ಲಿ ಒಂದು ಚಿಕ್ಕವಸ್ತು ಸಂಗ್ರಹಾಲಯವಿದೆ. 1933ರಲ್ಲಿ ಇಲ್ಲಿಗೆ ಬಂದು ಮಹಾತ್ಮಗಾಂಧಿ ಭಾಷಣ ಮಾಡಿದ ಸ್ಥಳದಲ್ಲಿ ಒಂದು ಚಿಕ್ಕಮಂಟಪ ಕಟ್ಟಿ ಅದಕ್ಕೆ ಗಾಂಧಿ ಮಂಟಪ ಎಂದು ಹೆಸರಿಟ್ಟಿದ್ದಾರೆ. ಆ ಮಂಟಪದಲ್ಲಿ ಗಾಂಧಿಯವರ ಚಿತಾಭಸ್ಮವನ್ನಿಡಲಾಗಿದೆ.
(ಪಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ